ನವದೆಹಲಿ: ಅತ್ಯಂತ ದುರಂತದ ಘಟನೆಯಲ್ಲಿ ನಟಿ ಮಯೂರಿ ದೇಶಮುಖ್ ಅವರ ಪತಿ ಮರಾಠಿ ನಟ ಅಶುತೋಷ್ ಭಕ್ರೆ, ಮಹಾರಾಷ್ಟ್ರದ ನಾಂದೇಡ್ ನಿವಾಸದಲ್ಲಿ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಅಶುತೋಷ್ ಅವರ ಪತ್ನಿ ಮಯೂರಿ ಬುಧವಾರ ಮಧ್ಯಾಹ್ನ ಕೆಳಗಡೆ ತನ್ನ ಅತ್ತೆಯೊಂದಿಗೆ ಮಾತನಾಡುತ್ತಿದ್ದಾಗ, ಅಶುತೋಷ್ ಅವರು ಸ್ವಲ್ಪ ಸಮಯದವರೆಗೆ ಮಲಗಬೇಕೆಂದು ಬಯಸಿ ಮೇಲೆ ಇರುವ ರೂಮಿಗೆ ಹೋಗಿದ್ದು, ಕೆಲವು ಗಂಟೆಗಳ ನಂತರ, ನಟನು ಎಚ್ಚರಗೊಳ್ಳದಿದ್ದಾಗ, ಕುಟುಂಬವು ಭಯಭೀತರಾಗಿ ಬಾಗಿಲು ತೆರೆಯಲು ಪ್ರಾರಂಭಿಸಿದರು, ಆದರೆ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕುಟುಂಬ ಸದಸ್ಯರು ಕಿಟಕಿಯಿಂದ ಕೋಣೆಯೊಳಗೆ ಇಣುಕಿ ನೋಡಿದಾಗ ಅಶುತೋಷ್ ನೇಣು ಬಿಗಿದ ಸ್ಥಿತಿಯನ್ನು ಕಂಡುಕೊಂಡರು. ಕುಟುಂಬ ಸದಸ್ಯರು ಬಾಗಿಲಿನ ಮೂಲಕ ಪ್ರವೇಶಿಸಿ, ಅಶುತೋಷ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತರಾಗಿದ್ದರು ಎಂದು ಘೋಷಿಸಲಾಯಿತು.
ಅಶುತೋಷ್ ಭಕ್ರೆ ನಾಲ್ಕು ವರ್ಷಗಳ ಹಿಂದೆ ಜನವರಿ 21, 2016 ರಂದು ನಟಿ ಮಯೂರಿ ದೇಶ್ಮುಖ್ ಅವರೊಂದಿಗೆ ಮದುವೆಯಾಗಿದ್ದರು. ಇವರಿಬ್ಬರು ನಾಂದೇಡ್‌ನಲ್ಲಿ ಸಿರಿವಂತ ಕುಟುಂಬಕ್ಕೆ ಸೇರಿದವರು. ದಂಪತಿಗಳು ನಾಂದೇಡ್ ನಗರದ ಗಣೇಶನಗರ ಪ್ರದೇಶದಲ್ಲಿ ಬಂಗಲೆ ಇದ್ದು, ಕೆಲವು ದಿನಗಳ ಹಿಂದೆ ಅದಕ್ಕೆ ಬೀಗ ಹಾಕಿ ತಮ್ಮ ತವರಿಗೆ ಬಂದಿದ್ದರು.
ಅಶುತೋಷ್ ಅವರು 'ಎಚ್ಚಾರ್ ಥಾರ್ಲಾ ಪಕ್ಕಾ' ಎಂಬ ಚಿತ್ರದಲ್ಲಿ ನಟಿಸಿದ ನಂತರ ಉದ್ಯಮದಲ್ಲಿ ಹೆಸರು ಪಡೆದಿದ್ದರು. 'ಖುಲ್ತಾ ಕಾಳಿ ಖುಲೇನಾ" ಧಾರಾವಾಹಿಯಲ್ಲಿ ನಟಿಸಿದ ನಂತರ ಅವರ ಪತ್ನಿ ಮಯೂರಿ ಕೂಡ ಮನೆಮಾತಾಗಿದ್ದರು.
ಅಶುತೋಷ್ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದಿಲ್ಲವಾದರೂ, 32 ವರ್ಷದ ನಟ ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.