ಅಪ್ರಾಪ್ತ ಬಾಲಕಿಯರ ಬಲವಂತದಿಂದ ವೇಶ್ಯಾವಾಟಿಕೆ - ಶಮೀನಾ, ಸಿದ್ದಿಕ್ ಬಂಧನ



ಮಂಗಳೂರು, ಫೆ.3: ನಗರದ ಅತ್ತಾವರದ ನಂದಿಗುಡ್ಡ ಸಮೀಪದ ಎಸ್‌ಎಂಆರ್‌ ಲಿಯಾನ ಅಪಾರ್ಟ್‌ಮೆಂಟ್‌ನಲ್ಲಿ ಅಪ್ರಾಪ್ತ ಬಾಲಕಿಯರು ಹಾಗೂ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಬಾಲಕಿಯೊಬ್ಬಳು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ದೂರಿನ ಪ್ರಕಾರ, ಶಮೀನಾ ಅವರು ಲಿಯೋನಾ  ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದಿದ್ದು, ಪತಿ ಸಿದ್ದಿಕ್ ಸಹಾಯದಿಂದ ಈ ಕೃತ್ಯ ಎಸಗಿದ್ದಾರೆ. ಐಶಮ್ಮ ಎಂಬ ಮಹಿಳೆ ಮತ್ತು ಕೆಲವರು ಸಿದ್ದಿಕ್ ಮತ್ತು ಶಮೀನಾಗೆ ಈ ವ್ಯವಹಾರದಲ್ಲಿ ಸಹಕರಿಸುತ್ತಿದ್ದರು ಎಂದು ತಿಳಿದುಬಂದಿದೆ. 

ಪೊಲೀಸರ ವಿಚಾರಣೆಯಲ್ಲಿ ಇದುವರೆಗೆ ಬೆಳಕಿಗೆ ಬಂದಿರುವ ವಿವರಗಳ ಪ್ರಕಾರ, ಆರೋಪಿಗಳು ಕಾಲೇಜಿಗೆ ವ್ಯಾಸಂಗಕ್ಕಾಗಿ ಹೋಗುವ ಹುಡುಗಿಯರನ್ನು ಆಮಿಷವೊಡ್ಡುತ್ತಿದ್ದರು ಮತ್ತು ಅಪ್ರಾಪ್ತ ವಯಸ್ಕರನ್ನು ವೇಶ್ಯಾವಾಟಿಕೆಗೆ ತಳ್ಳಲು ಬ್ಲಾಕ್‌ಮೇಲ್ ತಂತ್ರಗಳನ್ನು ಬಳಸುತ್ತಿದ್ದರು.

ಆರೋಪಿಗಳ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ನೆಟ್‌ವರ್ಕ್ ಭೇದಿಸಲು ತಾಂತ್ರಿಕ ಪರೀಕ್ಷೆಗೆ ಕಳುಹಿಸಿದ್ದಾರೆ.

ಪೊಲೀಸರು ಇದುವರೆಗೆ ಶಮೀನಾ, ಆಕೆಯ ಪತಿ ಸಿದ್ದಿಕ್, ಐಶಮ್ಮ ಹಾಗೂ ಇಬ್ಬರು ಅಪರಿಚಿತರನ್ನು ಬಂಧಿಸಿದ್ದಾರೆ. ಇಬ್ಬರಿಗೆ ಅಪರಾಧ ಕೃತ್ಯ ನಡೆಸಲು ಸಹಾಯ ಮಾಡುತ್ತಿದ್ದ ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ. ಪಾಂಡೇಶ್ವರ ಮಹಿಳಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Previous Post Next Post